ಒಂದು ಜ್ಯಾಮಿತೀಯ ಆಕೃತಿ (ಪ್ರಿಸ್ಮ್). ಎರಡು ಸರ್ವಾಂತರ ಸರ್ವಸಮ ಬಹುಭುಜಗಳು ಇದರ ಆಧಾರ ತಲಗಳು (ಬೇಸಸ್). ಇವುಗಳನ್ನು ಸಮರೂಪವಾಗಿಯೂ (ಸಿಮಿಲರ್‌ಲಿ) ಪರಸ್ಪರ ಸಮಾನಾಂತರವಾಗಿಯೂ ಭಿನ್ನ ಸಮತಲಗಳಲ್ಲಿ ಇಡಲಾಗಿದೆ. ತಲಗಳ ಅನುರೂಪ ಶೃಂಗಗಳನ್ನು ಸರಳರೇಖೆಗಳಿಂದ ಜೋಡಿಸಿದರೆ ಅಶ್ರಕದ ಫಲಕಗಳು ದೊರೆಯುತ್ತವೆ. ಆದ್ದರಿಂದ ತಲಗಳನ್ನುಳಿದ ಈ ಫಲಕಗಳನ್ನು ಪಾರ್ಶ್ವ ಫಲಕಗಳೆಂದು ಕರೆಯುವುದುಂಟು. ಪಾರ್ಶ್ವಫಲಕಗಳು ಸಮಾಂತರ ಚತುರ್ಭುಜಗಳು. ಇಂಥ ಎರಡು ಫಲಕಗಳು ಸಂಧಿಸುವ ರೇಖೆ ಅಥವಾ ತಲಗಳ ಅನುರೂಪ ಶೃಂಗಗಳನ್ನು ಜೋಡಿಸುವ ರೇಖೆಯ ಹೆಸರು ಪಾರ್ಶ್ವ ಅಂಚು (ಲ್ಯಾಟರಲ್ ಎಡ್ಜ್‌). 

ಅಶ್ರಗದ ಎರಡು ರೂಪಗಳು

ಪಾರ್ಶ್ವ ಅಂಚುಗಳು ಪರಸ್ಪರ ಸಮಾನ ಮತ್ತು ಸಮಾಂತರವಾಗಿದೆ. ತಲಗಳು ತ್ರಿಕೋನಗಳಾದಾಗ ತ್ರಿಕೋಣೀಯ ಅಶ್ರಗವೂ ಚತುಷ್ಕೋನಗಳಾದಾಗ ಚತುಷ್ಕೋನಾಶ್ರಗವೂ ಇತ್ಯಾದಿ ದೊರೆಯುತ್ತವೆ. ಸಮಾಂತರ ಷಟ್ಫಲಕ (ಪ್ಯಾರಲ್ಲಲೇಪೈಪಡ್) ಒಂದು ಅಶ್ರಗ. ಇಲ್ಲಿ ಯಾವುದೇ ಒಂದು ಜೊತೆ ಎದುರು ಫಲಕಗಳು ತಲಗಳಾಗುತ್ತವೆ. ಒಂದು ಅಶ್ರಗದ ತಲಗಳು ಕ್ರಮಬಹುಭುಜಗಳಾದರೆ (ರೆಗ್ಯುಲರ್ ಪಾಲಿಗನ್ಸ್‌-ಎಲ್ಲ ಭುಜಗಳೂ ಸಮಾನ, ಎಲ್ಲ ಕೋನಗಳೂ ಸಮಾನ) ಆ ಅಶ್ರಗ ಕ್ರಮಾಶ್ರಗವಾಗುವುದು (ರೆಗ್ಯುಲರ್ ಪ್ರಿಸ್ಮ್). ಇದನ್ನು ಪಟ್ಟಕವೆಂದು ಕರೆಯುವುದು ರೂಢಿಯಲ್ಲಿದೆ. ವಿಶೇಷವಾಗಿ ದ್ಯುತಿ ವಿಜ್ಞಾನದಲ್ಲಿ ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಗೋಚರ ರೋಹಿತವಾಗಿ ಪ್ರಸರಿಸಲು ಅಥವಾ ತಲೆಕೆಳಗಾದ ಪ್ರತಿಬಿಂಬ ಸ್ಥಾಪಿಸಲು ವಿವಿಧ ರೀತಿಯಲ್ಲಿ ತಯಾರಿಸಿದ ಅಶ್ರಗದ ಬಳಕೆ ಇದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ